ಓಟೋ ಆವರ್ತ: ಉಷ್ಣಚಲನಾವಿಜ್ಞಾನದ ಸೈದ್ಧಾಂತಿಕ ಆವರ್ತ (ಓಟೋ ಸೈಕಲ್). ಕಿಡಿ ಪ್ರಜ್ವಲಿತ (ಸ್ಪಾರ್ಕ್ ಇಗ್ನಿಷನ್) ಪೆಟ್ರೋಲ್ ಎಂಜಿನುಗಳ ಕ್ರಿಯೆ ಇದರ ಮೇಲೆ ಅವಲಂಬಿಸಿದೆ; ಮತ್ತು ಆ ಎಂಜಿನುಗಳನ್ನು ತುಲನೆ ಮಾಡಲು ಆವರ್ತದ ದಕ್ಷತೆಯನ್ನು (ಎಫಿಶಿಯನ್ಸಿ) ಒಂದು ಮಾನಕವಾಗಿ ಆರಿಸಲಾಗಿದೆ. ಆವರ್ತದ ಕ್ರಿಯಾವಿಧಿ ಹೀಗಿದೆ-ಉಷ್ಣಾಪಾರಕ ಸಂಪೀಡನ (ಏಡಿಯಾಬೆಟಿಕ್ ಕಂಪ್ರೆಶನ್), ಸ್ಥಿರಘನಗಾತ್ರ ಉಷ್ಣವಿಸರ್ಜನೆ. ಈ ಆವರ್ತದ ಯಶಸ್ವೀ ಪ್ರಥಮ ಪ್ರಯೋಗ ಮಾಡಿದವ ಓಟೋ (1876).

ಲ್ಯೂನ್ವಾರ್ ಎಂಜಿನಿನ ಪರಿಶೋಧನೆಯ (1859) ತರುವಾಯ ಅದರ ದಕ್ಷತೆಯನ್ನು ವರ್ಧಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಯಿತು. ಈ ದಿಶೆಯಲ್ಲಿ ನಡೆಸಿದ ಸೈದ್ಧಾಂತಿಕ ಪರೀಕ್ಷೆಗಳ ಫಲಿತಾಂಶಗಳನ್ನು 1862ರಲ್ಲಿ ಪ್ರಕಟಿಸಿದರು. ಇವುಗಳ ಪ್ರಕಾರ ಉರುಳೆಯೊಳಗೆ (ಸಿಲಿಂಡರ್) ಆಸ್ಫೋಟನೆಗಳು ಹಾಗೂ ಕೊಂತದ (ಪಿಸ್ಟನ್) ನಾಲ್ಕು ಚಲನೆಗಳು-ಇವುಗಳ ಸಮಗ್ರ ಪರಿಣಾಮ ಯಶಸ್ವಿಯಾಗಬಲ್ಲುದೆಂದು ವೇದ್ಯವಾಯಿತು. ಕೊಂತ ಹೊರಮುಖವಾಗಿ ಚಲಿಸಿದಂತೆ (ಮೊದಲನೆ ಚಲನೆ) ಅನಿಲ ಮತ್ತು ಗಾಳಿಯ ಒಂದು ಮಿಶ್ರಣ ಉರುಳೆಯೊಳಗೆ ಸೆಳೆಯಲ್ಪಡುವುದು. ಕೊಂತ ಒಳಕ್ಕೆ ಚಲಿಸಿದಂತೆ (ಎರಡನೆ ಚಲನೆ) ಮಿಶ್ರಣ ಸಂಪೀಡನಗೊಳ್ಳುತ್ತದೆ. ಸಂಪೀಡನ ಗರಿಷ್ಠಮಿತಿ ತಲಪಿದಾಗ ಒಂದು ಕಿಡಿ ಆಸ್ಫೋಟನೆಯನ್ನು ಪ್ರಜ್ವಲಿಸುವುದು. ಇದರಿಂದ ಕೊಂತ ಹೊರತಳ್ಳಲ್ಪಡುತ್ತದೆ. (ಮೂರನೆಯ ಚಲನೆ ಮತ್ತು ಸಾಮಥರ್ಯ್‌ಘಾತ). ಮತ್ತೆ ಕೊಂತ ಒಳಚಲಿಸಿದಾಗ (ನಾಲ್ಕನೆಯ ಚಲನೆ) ನಿಷ್ಕಾಸಾನಿಲಗಳು ವಿಸರ್ಜಿತವಾಗುತ್ತವೆ. ಈ ಆವರ್ತ ಮುಂದೆ ಪುನರಾವರ್ತನೆಗೊಳ್ಳುತ್ತದೆ. ಇಂಥ ಒಂದು ಅಂತರ್ದಹನ ಎಂಜಿನನ್ನು ಮೊದಲು ಆವಿಷ್ಕರಿಸಿದವ ಓಟೋ (1876). ಈ ಕಾರಣದಿಂದ ಓಟೋ ಆವರ್ತವೆಂದೇ ಕ್ರಿಯೆಗೆ ಹೆಸರು ಬಂದಿದೆ.

ಉಷ್ಣ ಮತ್ತು ಕಾರ್ಯ ಶಕ್ತಿಯ ರೂಪಗಳು. ಉಷ್ಣವನ್ನು ಕಾರ್ಯವಾಗಿ ಮಾರ್ಪಡಿಸುವ ಸಾಧನಗಳಿಗೆ ಉಷ್ಣ ಎಂಜಿನುಗಳೆಂದು ಹೆಸರು. ಅಂತರ್ದಹನ ಎಂಜಿನುಗಳು ಈ ಜಾತಿಯವು. ಇವುಗಳಲ್ಲಿ ಇಂಧನ ಮತ್ತು ಗಾಳಿಯ ಮಿಶ್ರಣದ ದಹನದಿಂದ ಉಷ್ಣ ಅನಿಲಗಳು ಉತ್ಪತ್ತಿಯಾಗುತ್ತವೆ. ಇವು ಕೊಂತದ ಮೇಲೆ ಬಲ ಹೇರುವುದರಿಂದ ಕೊಂತ ಚಲಿಸಿ ಸಾಮಥರ್ಯ್‌ (ಪವರ್) ಉತ್ಪತ್ತಿಯಾಗುತ್ತದೆ. ಎಂಜಿನುಗಳಲ್ಲಿ ಉಷ್ಣವು ಸಾಮಥರ್ಯ್‌ವಾಗಿ ಮಾರ್ಪಡಲು ನಿರ್ದಿಷ್ಟ ಕ್ರಿಯೆಗಳಾಗಬೇಕು. ಸತತವಾಗಿ ಸಾಮಥರ್ಯ್‌ ಉತ್ಪಾದನೆಯಾಗಲು ಇವು ಮತ್ತೆ ಮತ್ತೆ ನಡೆಯಬೇಕು. ಹೀಗೆ ಒಮ್ಮೆ ನಡೆದ ಕ್ರಿಯೆಗಳೇ ಮತ್ತೆ ಮತ್ತೆ ಅದೇ ಕ್ರಮದಲ್ಲಿ ನಡೆದರೆ ಅದು ಆವರ್ತ ಎನಿಸಿಕೊಳ್ಳುತ್ತದೆ.
ಓಟೋ ಆವರ್ತವನ್ನು ಉಪಯೋಗಿಸುವ ಎಂಜಿನುಗಳು: ಎಂಜಿನಿನ ಮುಖ್ಯಭಾಗ ಉರುಳೆ, ಇದರೊಳಗೆ ಕೊಂತ ಪ್ರತ್ಯಾಗಮನಿಯಾಗಿ (ರೆಸಿಪ್ರೋಕಲ್) ಚಲಿಸುತ್ತದೆ. ವಕ್ರದಂಡಕ್ಕೆ (ಕ್ರ್ಯಾಂಕ್ ಷಾಫ್ಟ್‌) ಕೂಡು ಸರಳಿನ (ಕನೆಕ್ಟಿಂಗ್ ರಾಡ್) ಮೂಲಕ ಇದನ್ನು ಜೋಡಿಸಲಾಗಿದೆ. ಈ ಜೋಡಣೆಯಿಂದ ಕೊಂತದ ಪ್ರತ್ಯಾಗಮನ ಚಲನೆ ವಕ್ರದಂಡದ ಆವರ್ತನ ಚಲನೆಯಾಗಿ (ರೊಟೇಟರಿ ಮೋಷನ್) ಮಾರ್ಪಡುತ್ತದೆ. ಕೊಂತದ ಚಲನೆಯಲ್ಲಿ ಅದು ಎರಡೂ ದಿಕ್ಕುಗಳಲ್ಲಿ ಮುಟ್ಟುವ ತುತ್ತತುದಿಗಳಿಗೆ ನಿಶ್ಚಲ ಬಿಂದುಗಳೆಂದು (ಡೆಡ್ಸೆಂಟರ್ಸ್) ಹೆಸರು. ಒಂದು ನಿಶ್ಚಲ ಬಿಂದುವಿನಿಂದ ಇನ್ನೊಂದಕ್ಕೆ ಕೊಂತ ಚಲಿಸುವುದಕ್ಕೆ ಘಾತ (ಸ್ಟ್ರೋಕ್) ಎನ್ನುತ್ತಾರೆ. ಉರುಳೆಯ ಶೀರ್ಷ ಭಾಗದಲ್ಲಿ (ಕವರ್) ಎರಡು ಕವಾಟಗಳುಂಟು (ವಾಲ್ವ್‌್ಸ). ಕೊಂತದ ಚಲನೆಯನ್ನನುಸರಿಸಿ ಅವು ಮುಚ್ಚಿ ತೆರೆಯುತ್ತವೆ. ಉರುಳೆಯಲ್ಲಿ ಇಂಧನ ಮತ್ತು ಗಾಳಿಯ ಮಿಶ್ರಣವನ್ನು ಹೊತ್ತಿಸಲು ಬೇಕಾಗುವ ಕಿಡಿಯನ್ನು ಕಿಡಿಬೆಣೆ (ಸ್ಫಾರ್ಕ್ಪ್ಲಗ್) ಉತ್ಪಾದಿಸುತ್ತದೆ. ಇಂಧನ ಮತ್ತು ಗಾಳಿಯನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಿ ಕಾರ್ಬುರೇಟರ್ ಎಂಬ ಭಾಗ ಉರುಳೆಗೆ ಸರಬರಾಜು ಮಾಡುತ್ತದೆ. ಸಾಮಥರ್ಯ್‌ವನ್ನು ಉತ್ಪಾದಿಸಲು ಎಂಜಿನು ಆವರ್ತಗಳಲ್ಲಿ ಕ್ರಿಯೆ ನಡೆಸುತ್ತದೆ ಎಂದು ಈಗಾಗಲೇ ಹೇಳಿದೆ. ಒಂದು ಆವರ್ತವನ್ನು ಪುರ್ಣಗೊಳಿಸಲು ಕೊಂತ ನಾಲ್ಕು ಘಾತಗಳನ್ನು ಮಾಡಿದರೆ ಅಥವಾ ವಕ್ರದಂಡ ಎರಡು ಪರಿಭ್ರಮಣೆ (ರಿವೊಲ್ಯೂಷನ್) ಮಾಡಿದರೆ ಅದಕ್ಕೆ ನಾಲ್ಕು ಘಾತಗಳ ಆವರ್ತ ಎಂಜಿನು ಎಂದು ಹೆಸರು. ಕೊಂತದ ಎರಡು ಘಾತುಗಳಿಂದಲೇ ಅಥವಾ ವಕ್ರದಂಡದ ಒಂದು ಪರಿಭ್ರಮಣೆಯಿಂದಲೇ ಆವರ್ತ ಪುರ್ಣಗೊಂಡರೆ ಅದಕ್ಕೆ ಎರಡು ಫಾತಕಗಳ ಆವರ್ತ ಎಂಜಿನೆಂದು ಹೆಸರು. (ನೋಡಿ- ಎಂಜಿನ್)	(ಕೆ.ಆರ್.ಎಂ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ